ಸಾಹಿತ್ಯ
ಆದಿಪುರಾಣಂ

೧. ಕೃತಿ : ಆದಿಪುರಾಣಂ

 

೨. ಲೇಖಕ :

ಅ. ಹೆಸರು: ಪಂಪ

ಆ. ಕಾಲ : ಜನನ-ಕ್ರಿ.ಶ. ೯೦೨, ಆದಿಪುರಾಣದ ರಚನೆ-ಕ್ರಿ.ಶ. ೯೪೧-೪೨

ಇ. ಸ್ಥಳ : ಪಂಪನ ಪೂರ್ವಿಕರು, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿಡುಗೊಂದೆ ಅಗ್ರಹಾರಕ್ಕೆ ಸೇರಿದವರು. ನಂತರ ಅವನ ವಂಶಸ್ಥರು, ಧಾರವಾಡ ಮತ್ತು ಉತ್ತರ ಕನ್ನಡ ಪ್ರದೇಶಕ್ಕೆ ವಲಸೆ ಬಂದರು. ಪಂಪನು ಕರ್ನಾಟಕದ ಬನವಾಸಿಯಲ್ಲಿ ಸ್ವಲ್ಪ ಕಾಲವನ್ನಾದರೂ ಕಳೆದಿರಬೇಕು. ಅವನ ತಾಯಿಯು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಎಂಬ ಊರಿಗೆ ಸೇರಿದವಳು.

ಈ. ಧರ್ಮ-ಜಾತಿ: ಜೈನ. ಅವನ ಪೂರ್ವಜರು ಬ್ರಾಹ್ಮಣ ಜಾತಿಯಿಂದ ಮತಾಂತರವಾದವರು.

ಉ. ರಾಜಾಶ್ರಯ: ಅವನು ವೇಮುಲವಾಡದ ಚಾಳುಕ್ಯವಂಶಕ್ಕೆ ಸೇರಿದ ಇಮ್ಮಡಿ ಅರಿಕೇಸರಿಯ (ಕ್ರಿ.ಶ.೯೩೩-೫೫) ಆಶ್ರಯದಲ್ಲಿ ಇದ್ದವನು.

ಊ. ಬಿರುದುಗಳು: ಆದಿ ಕವಿ, ರತ್ನತ್ರಯರಲ್ಲಿ ಒಬ್ಬ.

೩. ಸಾಹಿತ್ಯ ಪ್ರಕಾರ: ಕಾವ್ಯ-ಚಂಪೂ ಕಾವ್ಯ. ಗದ್ಯ ಮತ್ತು ಪದ್ಯಗಳ ಸಂಯೋಜನೆ. ಕಂದ ಪದ್ಯ, ವೃತ್ತಗಳು ಮತ್ತು ಅನೇಕ ಅಚ್ಚಗನ್ನಡ ಛಂದೋರೂಪಗಳನ್ನು ಬಳಸಲಾಗಿದೆ.

 

೪. ಪ್ರಕಟಣೆಯ ವಿವರಗಳು:

ಅ. ಹಸ್ತಪ್ರತಿಯ ವಿವರಗಳು:

ಆ. ಮೊದಲ ಮುದ್ರಿತ ಆವೃತ್ತಿ: ಕ್ರಿ.ಶ. ೧೯೦೦

ಇ. ಸಂ.: ಎಸ್.ಜಿ.ನರಸಿಂಹಾಚಾರ್

ಈ. ಗೌರ್ನಮೆಂಟ್ ಓರಿಯೆಂಟಲ್ ಲೈಬ್ರರಿ, ಮೈಸೂರು

ಉ. ನಂತರದ ಆವೃತ್ತಿಗಳು:

೧. ಪಂಪ ಮಹಾಕವಿ ವಿರಚಿತ ಆದಿಪುರಾಣಂ, ಸಂ. ಕೆ.ಜಿ.ಕುಂದಣಗಾರ್ ಮತ್ತು ಎ.ಪಿ.ಚೌಗುಲೆ, ಬೆಳಗಾಂ, ೧೯೫೩.

೨. ಆದಿಪುರಾಣ ಸಂಗ್ರಹ, ಎಲ್.ಗುಂಡಪ್ಪ, ೧೯೫೪, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

೩. ಪಂಪನ ಆದಿಪುರಾಣ, ಸಂ. ಎಲ್ ಬಸವರಾಜು, ೧೯೭೬, ಗೀತಾ ಬುಕ್ ಹೌಸ್, ಮೈಸೂರು

೪. ಪಂಪಕವಿ ವಿರಚಿತ ಆದಿಪುರಾಣಂ, (ಎಸ್.ಜಿ.ನ. ಅವರ ಆವೃತ್ತಿಯ ಎರಡನೆಯ ಪರಿಷ್ಕೃತ ಆವೃತ್ತಿ, ಟಿ.ವಿ.ವೆಂಕಟಾಚಲಶಾಸ್ತ್ರೀ, ೧೯೯೫, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.

೫. ಪಂಪನ ಸರಳ ಆದಿಪುರಾಣ, ಎಲ್ ಬಸವರಾಜು, ೨೦೦೮, ಅಭಿರುಚಿ ಪ್ರಕಾಶನ, ಮೈಸೂರು.

 

೫. ಕೃತಿಯ ಸಂಕ್ಷಿಪ್ತ ಪರಿಚಯ: ಆದಿಪುರಾಣವು ಕನ್ನಡದಲ್ಲಿ ಉಪಲಬ್ಧವಾಗಿರುವ ಮೊತ್ತಮೊದಲ ಸಾಹಿತ್ಯಕೃತಿ. ಜೈನ ತೀರ್ಥಂಕರರಲ್ಲಿ ಮೊದಲನೆಯವನಾದ ವೃಷಭನಾಥನ ಜೀವನವನ್ನು ನಿರೂಪಿಸುವ ಈ ಮಹಾಕಾವ್ಯವನ್ನು ವಿಶ್ವಕೋಶದ ಮಾದರಿಯ ಕೃತಿಯೆಂದು ಕರೆಯಬಹುದು. ಇದು ಕನ್ನಡದ ಶ್ರೇಷ್ಠ ಮಹಾಕಾವ್ಯಗಳ ಸಾಲಿಗೆ ಸೇರುತ್ತದೆ. ಇದು ತನ್ನ ಕಥಾವಸ್ತುವನ್ನು ಸಂಸ್ಕೃತದಲ್ಲಿ ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರಿಂದ ರಚಿತವಾಗಿರುವ ಪೂರ್ವಪುರಾಣ ಮತ್ತು ಮಹಾಪುರಾಣಗಳನ್ನು ಅವಲಂಬಿಸಿದೆ. ಬಹುಮಟ್ಟಿಗೆ ಮೂಲಕಥೆಗೆ ನಿಷ್ಠವಾಗಿದ್ದರೂ ಅದನ್ನು ಕಾವ್ಯವಾಗಿ ಪರಿವರ್ತಿಸಿ, ದೇಶ-ಕಾಲಗಳ ಪರಿಮಿತಿಯನ್ನು ಮೀರಿದ ಕೃತಿಯಾಗಿಸುವುದರಲ್ಲಿ ಪಂಪನು ಯಶಸ್ವಿಯಾಗಿದ್ದಾನೆ.

ಆದಿಪುರಾಣವು ವೃಷಭನಾಥ ಮತ್ತು ಅವನ ಮಕ್ಕಳಾದ ಭರತ, ಬಾಹುಬಲಿಯರ ಕಥೆಯನ್ನು ನಿರೂಪಿಸುತ್ತದೆ. ಮನುಷ್ಯಚೇತನವು ಪರಿಪೂರ್ಣತೆಯ ಕಡೆಗೆ ಮಾಡುವ ಪಯಣದ ಸಂಕೇತವೆನ್ನುವಂತೆ, ಆದಿನಾಥನ ಪೂರ್ವಜನ್ಮಗಳ ಭವಾವಳಿಯನ್ನು ವಿವರಿಸಲಾಗಿದೆ. ಅವನ ಜೀವನದ ಐದು ಮಂಗಳಮಯವಾದ ಘಟನೆಗಳನ್ನು ವರ್ಣಿಸಲಾಗಿದೆ.(ಪಂಚಕಲ್ಯಾಣ) ಆದಿನಾಥನ ವೈರಾಗ್ಯೋದಯದ ನಂತರವೂ ಕಥೆಯು ಮುಂದುವರಿಯುತ್ತದೆ. ಆಗ ಭರತ ಮತ್ತು ಬಾಹುಬಲಿಯರ ಸಂಘರ್ಷವು ಕೇಂದ್ರಸ್ಥಾನವನ್ನು ಪಡೆದುಕೊಳ್ಳುತ್ತದೆ. ಅಣ್ನ ತಮ್ಮಂದಿರ ನಡುವೆ ಮೂಡಿದ ಮನಸ್ತಾಪವು, ಬಾಹುಬಾಲಿಯ ವಿವೇಕ ಮತ್ತು ಮಹಾತ್ಯಾಗಗಳ ಫಲವಾಗಿ ಸರಿಹೋಗುತ್ತದೆ.

ಮನುಷ್ಯನ ಜೀವನ, ಮನುಷ್ಯಸಮಾಜ ಮತ್ತು ಮನುಷ್ಯಸಂಬಂಧಗಳನ್ನು ಕುರಿತಂತೆ ಕೆಲವು ಮಹತ್ವದ ಪ್ರಶ್ನೆಗಳನ್ನು ಕೇಳಿಕೊಂಡು, ಅವುಗಳ ಉತ್ತರಕ್ಕಾಗಿ ಅರಸುವುದರಿಂದ ನಮಗೆ ಆದಿಪುರಾಣವು ಮುಖ್ಯವಾಗುತ್ತದೆ. ಈ ಕಾವ್ಯವು ತನ್ನ ಉತ್ತರಗಳನ್ನು ಕಂಡುಕೊಳ್ಳುವುದು ಮತ್ತು ಓದುಗರಿಗೆ ತಲುಪಿಸುವುದು ಶುಷ್ಕವಾದ ನೀತಿಬೋಧೆಯಿಂದ ಅಲ್ಲ. ಬದಲಾಗಿ ಅದು ಓದುಗನನ್ನು ಕೂಡ ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಕರೆದೊಯ್ಯುತ್ತದೆ. ಈ ಪ್ರಶ್ನೆಗಳು ಮತ್ತು ಹುಡುಕಾಟಗಳು ಇಂದಿಗೂ ಮನುಷ್ಯನನ್ನು ಕಾಡುತಿರುವುದರಿಂದ ನಮಗೆ ಆದಿಪುರಾಣವು ಪ್ರಸ್ತುತವಾಗುತ್ತದೆ. ಭೋಗಲಾಲಸೆ, ಮಹತ್ವಾಕಾಂಕ್ಷೆ, ಯುದ್ಧ, ಅಹಂಕಾರ ಮುಂತಾದವು ಇಂದಿಗೂ ನಮ್ಮನ್ನು ಬಾಧಿಸುತ್ತಿವೆ.

ಆದಿಪುರಾಣವು ವಿವಿಧ ಛಂದೋವೃತ್ತಗಳಲ್ಲಿ ರಚಿತವಾಗಿರುವ ೧೬೩೦ ಪದ್ಯಗಳನ್ನು ತನ್ನ ಹದಿನಾರು ಆಶ್ವಾಸಗಳಲ್ಲಿ ಒಳಗೊಂಡಿದೆ. ಕಾವ್ಯಶೈಲಿಯು ಮಾರ್ಗ ಮತ್ತು ದೇಸಿ ನೆಲೆಗಳ ಅಂತೆಯೇ ಸಂಸ್ಕೃತ ಹಾಗೂ ಕನ್ನಡಗಳ ಸೂಕ್ತವಾದ ಹೊಂದಾಣಿಕೆಯನ್ನು ಸಾಧಿಸಿದೆ. ಪಂಪನು ಸಂಸ್ಕೃತದಿಂದ ತೆಗೆದುಕೊಂಡ ವೃತ್ತಗಳು ಮತ್ತು ಕಂದಪದ್ಯಗಳನ್ನು ಮಾತ್ರವಲ್ಲದೆ, ಅಚ್ಚಗನ್ನಡದ ಅನೇಕ ಛಂದೋಬಂಧಗಳನ್ನೂ ಬಳಸಿಕೊಂಡಿದ್ದಾನೆ.

ಆದಿಪುರಾಣದಲ್ಲಿ ಬರುವ, ಲಲಿತಾಂಗ-ಸ್ವಯಂಪ್ರಭೆ, ಶ್ರೀಮತಿ-ವಜ್ರಜಂಘ, ನೀಳಾಂಜನೆಯ ನೃತ್ಯ, ಭರತ ಬಾಹುಬಲಿಯರ ಸಂಘರ್ಷ ಮತ್ತು ಬಾಹುಬಲಿಯ ವೈರಾಗ್ಯದಂತಹ ಪ್ರಸಂಗಗಳು ಸಮಗ್ರ ಕನ್ನಡ ಸಾಹಿತ್ಯದ ಅತ್ಯುತ್ತಮ ಸೃಷ್ಟಿಗಳ ಸಾಲಿಗೆ ಸೇರುತ್ತವೆ. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ, ಪಂಪಭಾರತದ ಹೋಲಿಕೆಯಲ್ಲಿ ಕೊಂಚ ಹಿಂದೆ ಸರಿದಿದ್ದ ಆದಿಪುರಾಣವು ಈಗ ಮತ್ತೆ ಅತ್ಯುತ್ತಮ ಕಾವ್ಯವೆಂದು ಪರಿಗಣಿತವಾಗಿದೆ.

 

೬. ಮುಖ್ಯವಾದ ವ್ಯಾಖ್ಯಾನಗಳು ಮತ್ತು ವಿಮರ್ಶೆಗಳು:

ಅ. ಆದಿಪುರಾಣ ದೀಪಿಕೆ ಟಿ.ಎಸ್.ಶಾಮರಾವ್ ಮತ್ತು ಪ.ನಾಗರಾಜಯ್ಯ, ೧೯೯೧, ಚಂದ್ರಗುಪ್ತ ಗ್ರಂಥಮಾಲೆ, ಶ್ರವಣಬೆಳಗೊಳ.

ಆ. ಪಂಪ ಮಹಾಕವಿ ವಿರಚಿತ ಆದಿಪುರಾಣಂ,(ಗದ್ಯರೂಪ) ಕೆ. ನರಸಿಂಹ ಶಾಸ್ತ್ರೀ, ೧೯೮೦, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಇ. ನಾಡೋಜ ಪಂಪ, ಮುಳಿಯ ತಿಮ್ಮಪ್ಪಯ್ಯ,

ಈ. ಪಂಪ , ತೀ.ನಂ. ಶ್ರೀಕಂಠಯ್ಯ, 1939, ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಉ. ಪಂಪ-ಒಂದು ಅಧ್ಯಯನ, ಸಂ. ಜಿ.ಎಸ್. ಶಿವರುದ್ರಪ್ಪ, ೧೯೭೪, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಊ. ಮಹಾಕವಿ ಪಂಪ, ವಿ ಸೀತಾರಾಮಯ್ಯ

ಋ. ಪಂಪ-ಆರು ಉಪನ್ಯಾಸಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಎ. ಆದಿಪುರಾಣಂ-ಸಾಂಸ್ಕೃತಿಕ ಮುಖಾಮುಖಿ, ಸಂ. ಬಿ.ಎಂ. ಪುಟ್ಟಯ್ಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಏ. ಟಿ.ವಿ. ವೆಂಕಟಾಚಲಶಾಸ್ತ್ರೀ ಅವರು ಪರಿಷ್ಕರಿಸಿರುವ ೧೯೯೫ ರ ಆವೃತ್ತಿಯಲ್ಲಿ ಕೊಡಲಾಗಿರುವ ಲೇಖನಸೂಚಿ

 

೭. ವಿದ್ಯುನ್ಮಾನ ಸಂಪರ್ಕಗಳು:

. Jainism Articles and Essays

 

ಮುಖಪುಟ / ಸಾಹಿತ್ಯ